ನೀ ನಡೆದ ದಾರಿ
ನೀ ನಡೆದ ದಾರಿಯಲ್ಲಿ ನಿನ್ನ ಹೆಜ್ಜೆ ಗುರುತುಗಳೂ ಮಾಸಿವೆ... ನೀ ನಡೆದ ದಾರಿಯಲ್ಲಿ ಅರಳಿದ್ದ ಹೂವುಗಳೂ ಮುದುಡಿವೆ... ಏಕೆಂದರೆ ಅವಕ್ಕೆ ತಿಳಿದಿತ್ತು... ಅದು ನೀ ಇನ್ನೆಂದಿಗೂ ಮರಳಿ ಬಾರದ ದಾರಿಯೆಂದು... ನೀ ನಡೆದ ದಾರಿಯಲ್ಲಿ ಹಸಿರ ಚಿತ್ತಾರದ ಮೆರಗೂ ಬಾಡಿವೆ... ನೀ ನಡೆದ ದಾರಿಯಲ್ಲಿ ಬೀಸುತ್ತಿದ್ದ ತಂಗಾಳಿಯೂ ನಿನ್ನನ್ನೇ ಹಿಂಬಾಲಿಸಿದೆ... ಏಕೆಂದರೆ ಅವಕ್ಕೆ ತಿಳಿದಿತ್ತು... ಅದು ನೀ ಇನ್ನೆಂದಿಗೂ ಮರಳಿ ಬಾರದ ದಾರಿಯೆಂದು... ನೀ ನಡೆದ ದಾರಿಯಲ್ಲಿ ಹಕ್ಕಿ ಪಕ್ಷಿಗಳ ಕಲರವವೂ ಕೇಳದಾಗಿದೆ... ನೀ ನಡೆದ ದಾರಿಯಲ್ಲಿ ನಾ ಬಿಡಿಸಿದ ರಂಗಿನ ರಂಗೋಲಿಯೂ ಕದಡಿದೆ... ಏಕೆಂದರೆ ಅವಕ್ಕೆ ತಿಳಿದಿತ್ತು... ಅದು ನೀ ಇನ್ನೆಂದಿಗೂ ಮರಳಿ ಬಾರದ ದಾರಿಯೆಂದು... ಆದರೆ ಹೊಸ ಚಿಗುರಿನ ಹೂವು ಅರಳುವಂತೆ... ನವ ಚೈತ್ರಕ್ಕೆ ಹಸಿರ ಮೈಸಿರಿ ಚಿಗುರುವಂತೆ... ತಂಪಾದ ಗಾಳಿಯಲ್ಲಿ ಸುಗಂಧವು ಬೆರೆಯುವಂತೆ... ಮುಂಜಾನೆಯ ನಿಶ್ಶಬ್ದದಿ ಹಕ್ಕಿ ಪಕ್ಷಿಗಳ ಕಲರವ ಪ್ರತಿ ಧ್ವನಿಸುವಂತೆ... ನನ್ನ ಹೃದಯದ ಪ್ರತಿ ಭಾವವೂ ನಂಬಿದೆ... ನೀನೊಮ್ಮೆ ಬರುವೆ ಎಂದು... ಬಂದು ಈ ದಾರಿಗೆ ಮತ್ತೊಮ್ಮೆ ಜೀವಕಳೆ ತುಂಬುವೆಯೆಂದು... ನನ್ನ ಹೃದಯವು ಎಂದೆಂದಿಗೂ ಪ್ರಾಥಿ೯ಸುತಿದೆ... ನೀನೊಮ್ಮೆ ಬರುವೆ ಎಂದು... ಬಂದು ಈ ಜಗತ್ತಿಗೆ ಕಾಣದ ಹಾಗೆ ಜಾರಿದ ಕಣ್ಣೀರನ್ನು ಒರೆಸುವೆಯೆಂದು... ನನ್ನ ಹೃದಯದ ಪ್ರತಿ ಮಿಡಿತವೂ ನಿನ್ನ ಹೆಸರನ್ನೇ ಮಿಡಿಯುತಿದೆ... ನೀನೊಮ್ಮೆ ಬರುವೆ ಎಂದು... ಬಂದು ಈ ಬದುಕಿಗೆ ಬೆಳಕಾಗುವೆಯೆಂದು... ವಸಂತ ಕಾವ್ಯ
Poetry Books 50% Off
Bestselling collections from top poets
