ಕಾಲ
ಕರ್ತನೇ, ಕಾಲದ ಕುಣಿಕೆಯನ್ನು ಕೊರಳಿಗೆ ಕಟ್ಟಿ, ಕಣ್ಣಿಗೆ ಕಾಣದೆ ಕುಳಿತಿರುವಾಗ ಓಡುವ ಕನಸೇಕೆ? ಕಾಲವೇ ಕಲ್ಲಾಗಿ ಕಂಪನವನ್ನು ಮರೆತಿರುವಾಗ, ಕುಣಿದಾಡುವೇನೆಂಬ ಕಡುಬಯಕೆಯು ಬೇಕೇ? ಕಾಲದ ಕಾರಾಗೃಹಗಳಲ್ಲಿ ಕೈದಿಗಳು ಎಲ್ಲರೂ; ಎಲ್ಲರದ್ದೂ ಪ್ರತ್ಯೇಕ, ಕಿಂತು ಸಮಾಂತರ ಕಾಲ. ಕಾಲದ ಕೋಟೆಯ ಮಿತಿಯಿರದ ಕಣವಿಲ್ಲ — ಕಾಲಕ್ಕೆ ಕಾಯದ ಹೊರತು ಉಪಾಯವಿಲ್ಲ. ಕುರುಡಾಗಿ ಕರ್ಮದ ಕತ್ತಿಗೆ ಕುತ್ತಿಗೆ ಕೊಡದೆ, ಕಾಯಬೇಕು ಕುಗ್ಗದೆ, ಕೂಸಾಗಿ ಕಾಲದ ಸರದಿಗೆ. ಕಡೆಗೆ ಕಾಲ ಬಂದಾಗ, ಕೈವಾಡ ಕೋಟಿಯಿರಲಿ — ಕಲ್ಪವೃಕ್ಷವಾಗಿ ಕಾಪಾಡುವುದು, ಕಾಣದ ಕೈ ಕೇಳದೆ. ಕಂಡು ಹಿಡಿಯಲಾಗದು ಕಾಲದ ಕ್ರಿಯೆಯ ಕಲ್ಪನೆ; ಕಲ್ಮಶ ಕಳೆದು ಕ್ರಮಿಸಿದರೆ, ಕಾಲ ಕಷ್ಟಗಳ ಕರಗಿಸದೆ? ಕೃತಕ ಕಾಯದ ಕೊನೆಯಿರದ ಕೋರಿಕೆಗಳ ಕೇಳಿ ಕುಣಿದರೆ, ಕಣ್ಮುಚ್ಚಿದಮೇಲೂ ಕಳೆಯಲಾಗದು ಕರ್ಮದ ಕೋಲಿನ ಬರೆ. ಓಂಕಾರ. ಎಸ್. ಪಾಟೀಲ್
Ad
Poetry Books 50% Off
Bestselling collections from top poets
Shop Now →
